ಭಾರತೀಯ ನೃತ್ಯಗಳು	

ಭಾರತದಲ್ಲಿ ನಾಟ್ಯನರ್ತನಾದಿ ಕಲೆಗಳಿಗೆ ಸುಮಾರು 4000 ವರ್ಷಗಳ ದೀರ್ಘ ಪರಂಪರೆಯಿದೆ. ಋಗ್ವೇದದಲ್ಲಿ ನೃತ್ಯದ ಪ್ರಸಕ್ತಿಯಿದೆ. ಪಗಡೆ ದಾಳಗಳೊಂದಿಗೆ ಅಪ್ಸರೆಯರು ನೃತ್ಯಮಾಡಿದರೆಂಬ ವರ್ಣನೆ ಅಥರ್ವಣ ವೇದದಲ್ಲಿ ಉಂಟು. ಪಾಣಿನಿಯ ಅಷ್ಟಾಧ್ಯಾಯೀ ಮತ್ತು ಪತಂಜಲಿಯ ಮಹಾಭಾಷ್ಯ ಗ್ರಂಥಗಳಲ್ಲಿ ನಾಟ್ಯದ ಪ್ರಸ್ತಾಪವಿದೆ. ಮಹಾಕಾವ್ಯಗಳಾದ ರಾಮಾಯಣ, ಮಹಾಭಾರತಗಳಲ್ಲಿ ನರ್ತನದ ವಿವರಗಳಿವೆ. ಕಾಳಿದಾಸಾದಿ ನಾಟಕಕಾರ ಕೃತಿಗಳಲ್ಲಿ ನೃತ್ಯಕ್ಕೆ ಸಂಬಂಧಪಟ್ಟ ವಿಪುಲ ವಿವರಗಳು ದೊರಕುತ್ತವೆ. ಅಲ್ಲದೆ ನಾಟ್ಯದ ವಿವರಣೆಯನ್ನೇ ಪ್ರಧಾನವಿಷಯವಾಗಿಸಿಕೊಂಡ ಅನೇಕ ಗ್ರಂಥಗಳು ರಚನೆಗೊಂಡಿವೆ. ಅವುಗಳ ಪೈಕಿ ಭರತನ ನಾಟ್ಯಶಾಸ್ತ್ರ ಒಂದು ವಿಶಿಷ್ಟ ಕೃತಿ. ನಂದಿಕೇಶ್ವರನ ಅಭಿನಯದರ್ಪಣ ಇಂಥದೇ ಇನ್ನೊಂದು ಗ್ರಂಥ. ವಿಷ್ಣುಧರ್ಮೋತ್ತರ ಪುರಾಣ, ಮಾನಸೋಲ್ಲಾಸ, ಶಿವತತ್ತ್ವರತ್ನಾಕರ ಮೊದಲಾದ ವಿಶ್ವಕೋಶ ರೂಪದ ಗ್ರಂಥಗಳಲ್ಲಿ ನಾಟ್ಯದ ವಿವರಗಳಿವೆ. ಶಾಙ್ರ್ಗಧರನ ಸಂಗೀತ ರತ್ನಾಕರ ಎಂಬ ಗ್ರಂಥದಲ್ಲಿ ನಾಟ್ಯದ ವಿವರಣೆಗೆಂದೇ ಒಂದು ಅಧ್ಯಾಯವನ್ನು ಮೀಸಲಿಡಲಾಗಿದೆ. ಈ ಎಲ್ಲ ಕೃತಿಗಳು ಭರತಖಂಡದಲ್ಲಿ ಪ್ರಚಲಿತವಿದ್ದ ನೃತ್ಯಕಲೆಯ ವೈಶಿಷ್ಟ್ಯಗಳನ್ನೂ ಅದರ ರೂಪರೇಷೆಗಳನ್ನೂ ಸಮಗ್ರವಾಗಿ ವಿವರಿಸುವ ಆಕರ ಗ್ರಂಥಗಳಾಗಿವೆ.

ಭಾವತಾಳಲಯ ಯುಕ್ತವಾದ ಅಭಿನಯವೇ ನೃತ್ಯ. ನೃತ್ಯದಲ್ಲಿ ಲಾಸ್ಯ. ತಾಂಡವ ಎಂದು ಎರಡು ಬಗೆ. ಉದ್ಧತ ನೃತ್ಯವೇ ತಾಂಡವ; ಸುಕುಮಾರ ನೃತ್ಯವೇ ಲಾಸ್ಯ. ಪುರುಷ ಕರ್ತೃಕವಾದ ಉದ್ದತ ನೃತ್ಯವನ್ನು ತಾಂಡವವೆಂದೂ ಸ್ತ್ರೀಕರ್ತೃಕವಾದ ಲಾವಣ್ಯಯುಕ್ತ ನೃತ್ಯವನ್ನು ಲಾಸ್ಯವೆಂದೂ ಕರೆಯಲಾಗುತ್ತದೆ. ನೃತ್ಯದಲ್ಲಿ ಮಾರ್ಗ-ದೇಸಿ ಎಂಬ ಎರಡು ಪ್ರಭೇದಗಳಿವೆ. ಪರಂಪರೆಯಿಂದ ಕಾಲದೇಶ ಬದ್ಧವಾಗಿ ಉಳಿದು ಬಂದದ್ದು ದೇಸಿ ಅಥವಾ ಜನಪದವಾದರೆ ಸಂಪ್ರದಾಯಬದ್ದ ಮತ್ತು ಶಾಸ್ತ್ರಪ್ರಣೀತವಾದದ್ದು ಮಾರ್ಗ. ಭಾರತದಲ್ಲಿ ಈ ಎರಡೂ ವರ್ಗದ ಅನೇಕ ನೃತ್ಯಗಳು ಪ್ರಚಲಿತವಿವೆ. ಪ್ರಸ್ತುತಲೇಖದಲಲ್ಲಿ ಶಾಸ್ತ್ರೀಯ ನೃತ್ಯಗಳಾದ ಕಥಕ್, ಕಥಕಳಿ, ಕೂಚಿಪುಡಿ, ಭರತನಾಟ್ಯ, ಮಣಿಪುರಿ, ಒಡಿಸಿ ನೃತ್ಯಗಳ ಸ್ಥೂಲ ಸಮೀಕ್ಷೆಯನ್ನು ಮಾತ್ರ ಕೊಡಲಾಗಿದೆ. 

(ನೋಡಿ- ಭಾರತದ-ಜನಪದ-ನೃತ್ಯಗಳು)

ಭರತನಾಟ್ಯ ವಿಶೇಷವಾಗಿ ದಕ್ಷಿಣ ಭಾರತದಲ್ಲಿ, ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶಗಳಲ್ಲಿ ಪ್ರಚಲಿತವಿರುವ ನೃತ್ಯ ಪದ್ದತಿ. ಇದರಲ್ಲಿ ನೃತ್ತ, ನೃತ್ಯ, ನಾಟ್ಯ ಎಂದು ಮೂರು ವಿಭಾಗಗಳಿವೆ. ಸಭಾ ಕಲಾಪದ ಅನುಕ್ರಮ ಸ್ಥೂಲವಾಗಿ ಹೀಗಿರುತ್ತದೆ; ಪೂರ್ವಾರ್ಧದಲ್ಲಿ ಅಲರಿಪು, ಜತಿಸ್ವರ ಶಬ್ದ, ಪರವರ್ಣ-ಸ್ವರಜತಿವರ್ಣ, ಉತ್ತರಾರ್ಧದಲ್ಲಿ ಪದ, ಜಾವಳಿ, ದುರುಶ್ಲೋಕ-ಪದ-ಚೂರ್ಣಿಕೆ, ಅಷ್ಟಪದಿ-ದಶಾವತಾರ, ತಿಲ್ಲಾನ.		 (ನೋಡಿ- ಭರತನಾಟ್ಯ)

ಕಥಕ್ ನೃತ್ಯ ಪ್ರಕಾರ ರಾಜಸ್ಥಾನ, ಉತ್ತರಪ್ರದೇಶ ಮೊದಲಾದ ಕಡೆಗಳಲ್ಲಿ ಪ್ರಚಲಿತವಿದೆ. ಇದು ಲಾಸ್ಯಪ್ರಧಾನ ನೃತ್ಯ. ಪೌರಾಣಿಕ ಕಥೆಗಳನ್ನು ಅದರಲ್ಲಿಯೂ ವಿಶೇಷವಾಗಿ ಕೃಷ್ಣಕಥೆಗಳನ್ನು. ಅಭಿನಯಿಸುತ್ತಿದ್ದುದರಿಂದ ನೃತ್ಯಕ್ಕೆ ಹೆಸರು ಬಂತೆಂಬ ಅಭಿಪ್ರಾಯವಿದೆ. ನೃತ್ಯಕಲಿಸುವ ಉಪಾಧ್ಯಾಯರನ್ನು ಕಥಕ ಅಥವಾ ಕಥಿಕ ಎನ್ನುತ್ತಾರೆ. ಮುಸ್ಲಿಂ ಸಂಸ್ಕøತಿಯ ಪ್ರಭಾವ ಒತ್ತಡಗಳಿಂದಾಗಿ ಈ ನೃತ್ಯದಲ್ಲಿ ಅನೇಕ ಮಾರ್ಪಾಡುಗಳುಂಟಾದುವು. ಧಾರ್ಮಿಕತೆ, ನೀತಿ ಬೋಧೆಯ ಉದ್ದೇಶ ಗೌಣವಾಗಿ ಅಮೋದ, ಶೃಂಗಾರ ಹೆಚ್ಚಾದುವು. ಭರತನಾಟ್ಯದಲ್ಲಿರುವಂತೆಯೇ ಇಲ್ಲಿಯೂ ನೃತ್ತ. ನೃತ್ಯ, ನಾಟ್ಯಗಳೆಂಬ ವಿಭಾಗಗಳಿವೆ. ಇತರ ನೃತ್ಯ ಪ್ರಕಾರಗಳಲ್ಲಿ ವಿರಳವಾಗಿ ಕಾಣಿಸಿಕೊಳ್ಳುವ ಚಕ್ಕರ್ (ಪರಿಭ್ರಮಣ) ಕಥಕ್‍ನಲ್ಲಿ ಹೇರಳವಾಗಿ ಕಾಣಿಸಿಕೊಳ್ಳುತ್ತದೆ.  (ನೋಡಿ- ಕಥಕ್)

	ಕಥಕಳಿ ಕೇರಳದಲ್ಲಿ ಪ್ರಚಲಿತವಿರುವ ಪ್ರಸಿದ್ಧ ನೃತ್ಯ ಪ್ರಕಾರ. ಕೇರಳದಲ್ಲಿ ಮಧ್ಯಯುಗದಲ್ಲಿ ಪ್ರಚಲಿತವಿದ್ದ ಕೃಷ್ಣನಾಟ್ಟಂ ಅನಂತರ ಸುಮಾರು 17ನೆಯ ಶತಮಾನದಲ್ಲಿ ಹುಟ್ಟಿಕೊಂಡ ರಾಮನಾಟ್ಟಂ ನಾಟ್ಯ ಸಂಪ್ರದಾಯಗಳು ಕಾಲ ಕ್ರಮೇಣ ಅಟ್ಟಕಥಾ ಎಂದಾಗಿ ಕಳೆದ ಮೂರು ಶತಮಾನಗಳಿಂದ ಕಥಕಳಿ ಎಂಬ ಹೆಸರಿನಿಂದ ಖ್ಯಾತವಾಯಿತೆಂದು ಪ್ರತೀತಿ. ಕಥಕಳಿ ಸಾಂಘಿಕ ನೃತ್ಯ; ವೀರರಸ ಪ್ರಧಾನವಾದುದು. ಆಡುವ ಪ್ರಸಂಗಗಳು ಹೆಚ್ಚಾಗಿ ರಾಮಾಯಣ ಮಹಾಭಾರತ ಪುರಾಣಾದಿ ಪುಣ್ಯಕಥೆಗಳಾಗಿರುತ್ತವೆ. ನೃತ್ಯ ನಿರೂಪಣೆ ಎಂಟು ವಿಭಾಗಗಳಿಂದ ಕೂಡಿರುತ್ತದೆ. ಈ ವಿಭಾಗಳನ್ನು ಚಡಂಙ ಎನ್ನುತ್ತಾರೆ, ಅವುಗಳೆಂದರೆ ಕೇಳಿ, ಅರಂಙುಕೇಳಿ ಅಥವಾ ಶುದ್ದ ಮದ್ದಳಮ್, ತೋಟಯಮ್, ವಂದನಾ ಶ್ಲೋಕಗಳು, ಪುರಪ್ಪಾಟ್, ಮೇಳಪ್ಪದಮ್, ಕಥಾಭಿನಯಮ್, ಧನಾಶಿ, ವೇಷಭೂಷಣ, ಬಣ್ಣಕಲೆ ಈ ನೃತ್ಯದಲ್ಲಿ ಎದ್ದು ಕಾಣುವ ಅಂಶಗಳು. ನೃತ್ಯದಂತೆಯೇ ಸಂಗೀತಕ್ಕೂ ಇಲ್ಲಿ ಹೆಚ್ಚಿನ ಪ್ರಾಶಸ್ತ್ಯ ಕಂಡುಬರುತ್ತದೆ. 	

		(ನೋಡಿ- ಕಥಕಳಿ)

	ಕೂಚಿಪುಡಿ ಆಂಧ್ರ ರಾಜ್ಯದ ತೆಲುಗು ಸೀಮೆಯಲ್ಲಿ ಪ್ರಚಲಿತವಿರುವ ನೃತ್ಯ ಪ್ರಕಾರ. ಕೃಷ್ಣಾ ಜಿಲ್ಲೆಯ ದಿವಿ ತಾಲ್ಲೂಕಿನ ಕೂಚಿಪುಡಿ (ಕುಚೇಲಪುರ) ಇದರ ನೆಲೆ. ಇಲ್ಲಿ ಹುಟ್ಟಿ ಬೆಳೆದದ್ದರಿಂದ ನೃತ್ಯಕ್ಕೆ ಕೂಚಿಪುಡಿ ಎಂಬ ಹೆಸರು ಬಂತು. ಇದು ಏಕವ್ಯಕ್ತಿಯಿಂದಲೂ ಸಾಂಘಿಕವಾಗಿಯೂ ಪ್ರದರ್ಶಿಸಿಕೊಳ್ಳುವ ನೃತ್ಯಕಲೆ. ಸಂವಾದ ರೂಪದ ಕಥಾನಿರೂಪಣೆಯಿರುವುದರಿಂದ ನಾಟಕೀಯ ರಂಜನೆ ಈ ನೃತ್ಯಕ್ಕೆ ಒದಗಿದೆ. ಹಾಗಾಗಿ ಇದು ಜನಸಾಮಾನ್ಯರನ್ನು ತನ್ನತ್ತ ಆಕರ್ಷಿಸುವ ಗುಣ ಪಡೆದಿದೆ. ಭಾಮಾಕಲಾಪ, ಕೃಷ್ಣಾಲೀಲಾ ತರಂಗಿಣಿ ಪ್ರಹ್ಲಾದ ಚರಿತ್ರೆ, ಗೊಲ್ಲಕಲಾಪ, ಉಷಾಪರಿಣಯ -ಇಂಥ ನಾಟ್ಯ ರೂಪಕಗಳು ಕೂಚಿಪುಡಿಯನ್ನು ಜನಪ್ರಿಯಗೊಳಿಸಿವೆ. 
		(ನೋಡಿ- ಕೂಚಿಪುಡಿ-ನೃತ್ಯ)

	ಮಣಿಪುರ ರಾಜ್ಯದಲ್ಲಿ ಪ್ರಚಲಿತವಿರುವ ನೃತ್ಯ ಪದ್ದತಿಯೇ ಮಣಿಪುರಿ. ಇದರಲ್ಲಿ ಲಾಯ್ ಹರೋಬಾ, ರಾಸಲೀಲಾ ಎಂಬ ಎರಡು ಪ್ರಭೇದಗಳುಂಟು. ಲಾಯ್ ಹರೋಬಾ ವಿಶೇಷವಾಗಿ ಶಿವ-ಪಾರ್ವತಿಯರ ಲೀಲಾ ವಿನೋದವನ್ನೂ ಜಗತ್ತಿನ ಸೃಷ್ಟಿಯನ್ನೂ ವಸ್ತುವಾಗುಳ್ಳ ನೃತ್ಯ. ರಾಸಲೀಲಾ ಕೃಷ್ಣ ಗೋಪಿಕೆಯರ ರಸಮಯ ವಿಲಾಸವನ್ನು ನಿರೂಪಿಸುವ ನೃತ್ಯ. ಋತುಮಾನಕ್ಕೆ ಅನುಗುಣವಾದ ವಸಂತರಾಸ್, ಕುಂಜರಾಸ್, ಝಾಲನ್ ಯಾತ್ರಾ ನೃತ್ಯಗಳು ರಂಜನೀಯವಾಗಿರುತ್ತವೆ. ಲಾಸ್ಯ ಹಾಗೂ ತಾಂಡವ ನೃತ್ಯಗಳ ವಿಲಾಸವನ್ನು ಮಣಿಪುರಿಯಲ್ಲಿ ಕಾಣಬಹುದಾಗಿದೆ.		

 (ನೋಡಿ- ಮಣಿಪುರಿ)

	ಒಡಿಸಿ ಒರಿಸ್ಸ ರಾಜ್ಯದಲ್ಲಿ ಪ್ರಚಲಿತವಿರುವ ನೃತ್ಯಪ್ರಕಾರ ಇದೊಂದು ಸ್ವತಂತ್ರ ನೃತ್ಯಪ್ರಕಾರ ಎಂಬ ಬಗ್ಗೆ ಭಿನ್ನಾಭಿಪ್ರಾಯಗಳಿದ್ದರೂ ಹಸ್ತಮುದ್ರೆಗಳು, ಭಂಗಿಗಳು, ಸ್ಥಾನಕಗಳು, ಭ್ರಮರಿಗಳು, ಚಾಲನಿಕಗಳಲ್ಲಿ ಕೆಲವು ವೈಶಿಷ್ಟ್ಯಗಳನ್ನು ಈ ನೃತ್ಯದಲ್ಲಿ ಕಾಣಬಹುದಾಗಿದೆ. ಈ ನೃತ್ಯ ಸಂಪ್ರದಾಯದ ಮೇಲೆ ಶೈವ, ವೈಷ್ಣವ, ಭೌದ್ಧ ಧರ್ಮಗಳ ಪ್ರಭಾವ ಗಾಢವಾಗಿ ಆಗಿರುವುದನ್ನು ಗುರುತಿಸಬಹುದಾಗಿದೆ.			 (ನೋಡಿ- ಒರಿಸ್ಸ-ನೃತ್ಯ-ಸಂಪ್ರದಾಯ)

	ಇವಲ್ಲದೆ ಪಾಶ್ಚಾತ್ಯ ಪ್ರಭಾವದಿಂದ ಅನೇಕ ನೃತ್ಯಗಳು ಭಾರತದಲ್ಲಿ ಇಂದು ಸಮುದಾಯದ ಗಮನಸೆಳೆದಿವೆ. ಅಂಥವುಗಳ ಪೈಕಿ ಬ್ಯಾಲೆ, ಡಿಸ್ಕೊ, ರಾಕ್-ಎನ್-ರೋಲ್ ನೃತ್ಯಗಳನ್ನು ಹೆಸರಿಸಬಹುದು. ಭಾರತೀಯ ನೃತ್ಯ ಪರಂಪರೆಯನ್ನು ಪೋಷಿಸಿಕೊಂಡು ಬೆಳೆಸಿಕೊಂಡು ಬರುವಲ್ಲಿ ಕೇಂದ್ರ ಹಾಗೂ ರಾಜ್ಯ ಸಂಗೀತನಾಟಕ ಅಕಾಡೆಮಿಗಳು, ಖಾಸಗಿ ಕಲಾಕೇಂದ್ರಗಳು ಅಪಾರ ಸೇವೆ ಸಲ್ಲಿಸಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ. 					
	(ಎಂ.ವಿ.ಅರ್‍ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ